ಸಮಾಜಮುಖಿ ಅನುಭವದಿಂದ ಮಾಗಿದ ವ್ಯಕ್ತಿತ್ವ

ಮಹದೇವಪುರ ಕ್ಷೇತ್ರದ ಜನತೆಯ ಮನೆ-ಮನಗಳನ್ನು ಪ್ರವೇಶಿಸಿ ಮುಕ್ತವಾಗಿ ಮಾತನಾಡುವ, ಜನರೊಂದಿಗೇ ಬೆರೆತು ಕಷ್ಟ – ಸುಖಗಳನ್ನು ಅರಿಯುವ ಸ್ವಭಾವ ಅರವಿಂದ ಲಿಂಬಾವಳಿಯವರಿಗೆ ವಿದ್ಯಾರ್ಥಿ ದೆಸೆಯಿಂದಲೂ ಬಂದಿದೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ವಿದ್ಯಾರ್ಥಿ ಆಂದೋಳನಗಳ ಮೂಲಕವೇ ಅರವಿಂದ ಲಿಂಬಾವಳಿ ಬೆಳೆದಿದ್ದಾರೆ.

ಎಪ್ಪತ್ತರ ದಶಕದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಹಾಗೂ ಎಂಬತ್ತರ ದಶಕದ ಆರಂಭದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ (ಅಭಾವಿಪ) ಕಾರ್ಯಕರ್ತರಾಗಿ ಸಾಮಾಜಿಕ ಜೀವನ ಆರಂಭಿಸಿದ ಅರವಿಂದ ಲಿಂಬಾವಳಿಯವರು ೧೯೮೬ರಿಂದ ಆರು ವರ್ಷಗಳ ಕಾಲ ಅಭಾವಿಪ ರಾಜ್ಯ ಸಹಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದರು. ಪಾಲಿಟೆಕ್ನಿಕ್ ಶಿಕ್ಷಣ ರಂಗದ ಸಮಸ್ಯೆಗಳ ವಿರುದ್ಧ ಹೋರಾಡಲು ೧೯೮೭ರಲ್ಲಿ ಮೂಡಿದ ಕರ್ನಾಟಕ ರಾಜ್ಯ ಪಾಲಿಟೆಕ್ನಿಕ್ ಕ್ರಿಯಾಸಮಿತಿ ಸಂಚಾಲಕರಾದ ಅರವಿಂದ ಲಿಂಬಾವಳಿ ಅವರಲ್ಲಿ ಕಂಡಿದ್ದು ಯುವೋತ್ಸಾಹದ ಕಿಚ್ಚು. ವಿದ್ಯಾರ್ಥಿ ಆಂದೋಲನದಲ್ಲಿ ಭಾಗಿಯಾಗಿ ಬದಲಾವಣೆ ತರಬೇಕೆಂಬ ತವಕ.

ಶಿಕ್ಷಣ ದುರವಸ್ಥೆ ವಿರುದ್ಧ ಹೋರಾಟದ ಸರಮಾಲೆ

ಆಗಷ್ಟೇ ರಾಜ್ಯದೆಲ್ಲೆಡೆ ನೂರಾರು ಪಾಲಿಟೆಕ್ನಿಕ್‌ಗಳು ನಾಯಿಕೊಡೆಗಳಂತೆ ತಲೆಯೆತ್ತಿದ್ದವು. ಕಳಪೆ ಮೂಲಸೌಕರ್ಯ, ದುರವಸ್ಥೆಯಿಂದ ಕೂಡಿ ಲಕ್ಷಾಂತರ ವಿದ್ಯಾರ್ಥಿಗಳನ್ನು ಶೋಷಿಸುತ್ತಿದ್ದವು. ಶಿಕ್ಷಣರಂಗದ ಈ ದುಸ್ಥಿತಿಯನ್ನು ಪ್ರತಿಭಟಿಸಿ ಅರವಿಂದ ಲಿಂಬಾವಳಿ ಹೋರಾಟಕ್ಕೆ ಧುಮುಕಿದರು. ಅವರು ನಾಡಿನ ನೂರಾರು ಪಾಲಿಟೆಕ್ನಿಕ್‌ಗಳ ದುರವಸ್ಥೆಯ ಸಮೀಕ್ಷಾವರದಿಯನ್ನು ಸಿದ್ಧಪಡಿಸಿದಾಗ ಇಡೀ ರಾಜ್ಯವೇ ಬೆಚ್ಚಿಬಿದ್ದಿತ್ತು. `ಸುಧಾ’ ವಾರಪತ್ರಿಕೆಯು `ಪಾಲಿಟೆಕ್ನಿಕ್‌ಗಳ ಕಥೆ ವ್ಯಥೆ’ ಎಂಬ ಅಗ್ರಲೇಖನ ಪ್ರಕಟಿಸಿ ಜನಾಭಿಪ್ರಾಯ ರೂಪಿಸಿದ್ದು ಈಗ ಇತಿಹಾಸ. ಇಂಜಿನಿಯರಿಂಗ್ ಶಿಕ್ಷಣದ ಕುರಿತೂ ಅವರ ಹೋರಾಟ ಗಮನಾರ್ಹ.

ರಾಜ್ಯದ ಶಿಕ್ಷಣ ವ್ಯವಸ್ಥೆ ಸುಧಾರಿಸಲು ೧೨೦ ಬೇಡಿಕೆಗಳನ್ನು ಮುಂದಿಟ್ಟು ನಡೆದ ೧೯೯೨ರ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಬೃಹತ್ `ಕ್ಯಾಂಪಸ್ ಉಳಿಸಿ’ ರ್‍ಯಾಲಿಯ ಸಂಘಟನೆಯಲ್ಲಿ ರ್‍ಯಾಲಿಯ ಸಂಚಾಲಕರಾಗಿದ್ದ ಅರವಿಂದ ಲಿಂಬಾವಳಿಯವರದೇ ಪ್ರಮುಖ ಪಾತ್ರ. ಈ ರ್‍ಯಾಲಿಯು ಈಗಲೂ ಒಂದು ರಾಷ್ಟ್ರೀಯ ದಾಖಲೆ.

ಅಷ್ಟು ಹೊತ್ತಿಗೆ ಅಭಾವಿಪ ರಾಷ್ಟ್ರೀಯ ಕಾರ್ಯದರ್ಶಿಗಳಲ್ಲಿ ಒಬ್ಬರಾಗಿದ್ದ ಅರವಿಂದ ಲಿಂಬಾವಳಿಯವರು ಕಾಶ್ಮೀರ ಉಳಿಸಿ ಆಂದೋಳನದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಅಭಾವಿಪದ ರಾಜ್ಯ ಕಾರ್ಯದರ್ಶಿಯಾಗಿಯೂ ವಿದ್ಯಾರ್ಥಿ ಹೋರಾಟವನ್ನು ಮುಂದುವರಿಸಿದ ಅವರು ೧೯೯೫ರಲ್ಲಿ ಹಿರಿಯರ ಅಪೇಕ್ಷೆಯಂತೆ ಪಕ್ಷ ರಾಜಕಾರಣವನ್ನು ಪ್ರವೇಶಿಸಿದರು.

Leave a Comment

Your email address will not be published. Required fields are marked *